Friday, February 28, 2020

ಕೊರೋನಾ ವೈರಸ್ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ

         ಸದ್ಯ ಜಗತ್ತಿನಾದ್ಯಂತ ಸುದ್ದಿಯಲ್ಲಿರೊ, ಭಯಭೀತಿ ಉಂಟು ಮಾಡಿರೋ ವಿಷಯವೆಂದರೆ ಕೊರೋನಾ ವೈರಸ್. ಈ ಕೊರೋನಾ ವೈರಸ್ ಎಂದರೆ ಏನು? ಹೇಗೆ ಹುಟ್ಟಿಕೊಂಡಿತು? ಹರಡುವ ಬಗೆ ಹೇಗೆ? ರೋಗ ಲಕ್ಷಣಗಳೇನು? ಹೀಗೆ ನಾನಾ ಬಗೆಯ ಪ್ರಶ್ನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಂಡಿತು. ಇದನ್ನು ಹುಡುಕಲು ಶುರು ಮಾಡಿದೆ. ಹಾಗಂತ ನಾನೇನು ವಿಜ್ಞಾನಿ ಅಲ್ಲ. ಇಂಟರ್ನೆಟ್ ನಲ್ಲಿ ಹುಡುಕಿದೆ. ಆಗ ನನಗೆ ತಿಳಿದ ವಿಷಯವನ್ನು ನಿಮಗೂ ತಿಳಿಸುವ ಹಂಬಲವಾಯಿತು. ಅದಕ್ಕಾಗಿ ಕೊರೋನಾ ವೈರಸ್ ನ ಬಗ್ಗೆ ಸರಳವಾಗಿ ತಿಳಿಯೋಣ ಬನ್ನಿ.....
          ಕೊರೋನಾ ವೈರಸ್ ಗಳನ್ನು 1960ರ ದಶಕದಲ್ಲಿ ಪತ್ತೆಹಚ್ಛಲಾಯಿತು. ಚೀನಾದ ವಲ್ಡ್ ಹೆಲ್ತ್ ಆರ್ಗನೈಜೇಷನ್ನಲ್ಲಿ(World Health Organization)  ಡಿಸೆಂಬರ್ 31 2019ರಲ್ಲಿ ಅಪರಿಚಿತ ನ್ಯೂಮೋನಿಯಾ ಪತ್ತೆಯಾಗುತ್ತದೆ. ಕಾರಣ ಕಂಡುಹಿಡಿಯಲು ಹೋರಾಟ ವಿಜ್ಞಾನಿಗಳಿಗೆ ಕೊರೋನಾ ವೈರಸ್ ಪತ್ತೆಯಾಯಿತು. ಮೊಟ್ಟ ಮೊದಲಿಗೆ ಚೀನಾದ ವುಹಾನ್ ನಲ್ಲಿ ವರದಿಯಾಯಿತು.  ಈ ವೈರಸ್ ಗೆ ವಲ್ಡ್ ಹೆಲ್ತ್ ಆರ್ಗನೈಜೇಷನ್ ಫೆಬ್ರುವರಿ 11 2020ರಂದು "COVID 19" ಅಂತ ನಾಮಕರಣ ಮಾಡಿತು. ಆದರೆ ನಾವಿಲ್ಲಿ ಕೊರೊನ ವೈರಸ್ ಅಂತಾನೆ ಕರೆಯೋಣ, ಯಾಕಂದರೆ  COVID 19 ಅಂದರೆ ಯಾರಿಗೂ ಗೊತ್ತಾಗೊಲ್ಲ. ಇದೊಂದು ಕೊರೋನಾವಿರಿನೆ ಕುಟುಂಬಕ್ಕೆ ಸೇರಿದ ವೈರಸ್. ಕೊರೋನಾ ವೈರಸ್ ಎಂಬ ಹೆಸರು ಲ್ಯಾಟಿನ್ ಕರೋನದಿಂದ ಬಂದಿದೆ. ಕರೋನ ಎಂದರೆ ಕಿರೀಟ ಎಂದರ್ಥ. ಕೊರೋನಾ ವೈರಸ್ ನ್ನು ಸೂಕ್ಷ್ಮದರ್ಶದ ಮೂಲಕ ನೋಡಿದಾಗ ಕ್ಲಬ್ ಆಕಾರದ ಕೆಂಪು ಬಣ್ಣದಲ್ಲಿ ಚಿಗುರಿನಂತೆ ಕಾಣುತ್ತದೆ.  ಚೀನಾ ಸರಕಾರವು ಏಕಾಏಕಿ ಜನವರಿ 30 2020 ರಂದು "ಸಾರ್ವಜನಿಕ ಅರೋಗ್ಯ ತುರ್ತು ಪರಿಸ್ಥಿತಿ"  ಘೋಷಿಸಲಾಯಿತು. ಈ ಕೊರೋನಾ ವೈರಸ್ ಸಸ್ತನಿ ಮತ್ತು ಪಕ್ಷಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸ್ ನ ಗುಂಪಿಗೆ ಸೇರಿದೆ.
         ಕೊರೋನಾ ವೈರಸ್ ಬೇರೆ ಬೇರೆ ಜೀವಿಗಳಲ್ಲಿ ಬೇರೆಬೇರೆ ರೋಗ ಸೋಂಕುಗಳನ್ನು ತರುತ್ತದೆ. ಮನುಷ್ಯರಲ್ಲಿ ಶ್ವಾಸನಾಳದ ಸೋಂಕುಗಳನ್ನು, ಪಕ್ಷಿಗಳಲ್ಲಿ ಮೇಲ್ಭಾಗದ ಶ್ವಾಸೇಂದ್ರಿಯ ರೋಗಗಳನ್ನು, ಹಸು ಮತ್ತು ಹಂದಿಗಳಲ್ಲಿ ಅತಿಸಾರವನ್ನು ಉಂಟು ಮಾಡುತ್ತದೆ. ಮನುಷ್ಯರಲ್ಲಿ ಹರಡುವ ಕೊರೋನಾ ವೈರಸ್ ಸೋಂಕನ್ನು ತಡೆಯಲು ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳಾಗಲಿ, ಔಷದಿಗಳಾಗಲಿ ಇಲ್ಲ.  ಮನುಷ್ಯ ಸೀನುವಾಗ, ಕೆಮ್ಮುವಾಗ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಈ ವೈರಸ್ ಸೋಂಕು ಹೆಚ್ಚಾಗಿ ಬಾವಲಿಗಳ ದೇಹದಲ್ಲಿ ಸುದೀರ್ಘ ಕಾಲದವರೆಗೂ ಜೀವಿಸುತ್ತದೆ. ಕೊರೋನಾ ವೈರಸ್ ವಯಸ್ಕರು ಮತ್ತು ಮಕ್ಕಳಲ್ಲಿ ಶೀತ, ಜ್ವರ, ಒಣ ಕೆಮ್ಮು, ಅತಿಯಾದ ವಾಂತಿ ಭೇದಿ ಗಮನಾರ್ಹ ಪ್ರಮಾಣದಲ್ಲಿ ಉಂಟುಮಾಡುತ್ತದೆ ಮತ್ತು ಗಂಟಲು ಊದಿಕೊಂಡು ಉಸಿರಾಟ ನಾಳವನ್ನು ಸಂಕುಚಿತಗೊಳಿಸಿ ಉಸಿರಾಡಲು ತುಂಬಾ ಕಷ್ಟಕರವಾಗುತ್ತದೆ. ಕೊರೋನಾ ವೈರಸ್ ಚಳಿಗಾಲದಲ್ಲಿ ಹೆಚ್ಚಾಗಿ ಹರಡುತ್ತದೆ ಮತ್ತು ದೀರ್ಘ ಕಾಲ ಜೀವಂತವಾಗಿರುತ್ತದೆ. ಮಾನವ ಕೊರೋನಾ ವೈರಸ್ ನ್ನು ಏಳು ತಳಿಗಳಾಗಿ ವಿಂಗಡಿಸಲಾಗಿದೆ,
1.   ಹ್ಯೂಮನ್ ಕೊರೋನಾ ವೈರಸ್ 229E
2    ಹ್ಯೂಮನ್ ಕೊರೋನಾ ವೈರಸ್ OC43
3    ಸಿಂಡ್ರೋಮ್ ಕೊರೋನಾ ವೈರಸ್ SARS-CoV
4     ಹ್ಯೂಮನ್ ಕೊರೋನಾ ವೈರಸ್ NL63
5     ಹ್ಯೂಮನ್ ಕೊರೋನಾ ವೈರಸ್ HKU1
6     ಸಿಂಡ್ರೋಮ್ ಕೊರೋನಾ ವೈರಸ್ MERS-CoV
7     ಸಿಂಡ್ರೋಮ್ ಕೊರೋನಾ ವೈರಸ್ SARS-CoV2.
ಕೊರೋನಾ ವೈರಸ್ 2012ರಲ್ಲಿ ಜೆಡ್ಡಾ, ಸೌದಿ ಅರೇಬಿಯಾದಲ್ಲಿ ಕಂಡು ಬಂದಿದ್ದು 858 ಜನರ ಬಲಿಪಡಿದಿತ್ತು  ಎಂಬ ಮಾಹಿತಿ ಇದೆ.
              ಕೊರೋನಾ ವೈರಸ್ ಸದ್ಯ ಭಾರತದಲ್ಲಿ ಯಾವುದೇ ರೀತಿಯಲ್ಲಿ ಪ್ರಾಣಹಾನಿ ಮಾಡಲಿಲ್ಲ. ಹಾಗೆಯೇ ಇಲ್ಲಿ ಚೀನಾದ ವಿದ್ಯಾರ್ಥಿಗಳಲ್ಲಿ ಕೊರೋನಾ ವೈರಸ್ ಕಂಡುಬಂದಿದ್ದು, ಅವರು ಗುಣಮುಖರಾಗಿದ್ದಾರೆ. ಆದರೆ ಭಾರತದ ಮಾರುಕಟ್ಟೆಗೆ ಬಹಳ ಪ್ರಮಾಣದ ಹಾನಿಯುಂಟುಮಾಡಿದೆ. ಅದರಲ್ಲೂ ಕೋಳಿ ಸಾಕಾಣಿಕೆದಾರರನ್ನು ಅಕ್ಷರಾಂಶ ಬೀದಿಪಾಲು ಮಾಡಿದೆ. ಇದಕೆಲ್ಲ ಕಾರಣ  ಕೆಲವು ಆಗುಂತಕರು  ಸಾಮಾಜಿಕ ಜಾಲತಾಣಗಳಲ್ಲಿ ಕೋಳಿಗಳಲ್ಲಿ ಕೊರೋನಾ ವೈರಸ್ ಇದೆ ಅನ್ನೋ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಕೋಳಿಯಲ್ಲಿ ಯಾವುದೇ  ಕೊರೋನಾ ವೈರಸ್ ಇಲ್ಲ ಎಂದು ಭಾರತ ಸರಕಾರದ ಅರೋಗ್ಯ ಇಲಾಖೆಯೇ ದೃಢಪಡಿಸಿದೆ. ಆದರೂ ನಮ್ಮ ಜನ ಸಾಮಾಜಿಕ ಜಾಲತಾಣವನ್ನು ನಂಬುವಷ್ಟು ಅರೋಗ್ಯ ಇಲಾಖೆಯನ್ನು ನಂಬುವುದಿಲ್ಲ. ಇದಕೆಲ್ಲ ಕಾರಣ ನಾವು ಸಾಮಾಜಿಕ ಜಾಲತಾಣಕ್ಕೆ ಅಷ್ಟೊಂದು ಒಗ್ಗಿಕೊಂಡಿರುವುದು. ದೊಡ್ಡ ದೊಡ್ಡ ಕೋಳಿ ಸಾಕಾಣಿಕಾ ಕಂಪನಿಗಳು ಕೋಳಿಯಲ್ಲಿ ಯಾವುದೇ ಕೊರೋನಾ ವೈರಸ್ ಇಲ್ಲ ಕೋಳಿ ಸೇವನೆಗೆ ಯೋಗ್ಯವಾಗಿದೆ ಎಂಬ ಪ್ರಚಾರ ಮಾಡುತ್ತಿದೆ. ಭಾರತೀಯರಾದ ನಾವು ಕೊರೋನಾ ವೈರಸ್ ನ ಬಗ್ಗೆ ಯಾವುದೇ ಭಯಪಡಬೇಕಾಗಿಲ್ಲ. ನಾವು ಇಲ್ಲಿ ಆಹಾರ ಪದಾರ್ಥಗಳನ್ನು ಸರಿಯಾಗಿ ಬೇಯಿಸಿ ತಿನ್ನುತ್ತಿದ್ದೇವೆ, ಇದರಿಂದ ಯಾವುದೇ ವೈರಸ್ ಹರಡಲು ಸಾಧ್ಯವಿಲ್ಲ.
             ಕೊರೋನಾ ವೈರಸ್ ಉದಯೋನ್ಮುಖ ಸೋಂಕು ವೈರಸ್ ಆಗಿದ್ದು ಇದರ ಹರಡುವಿಕೆಯ ತೀವ್ರತೆ ಮತ್ತು ಇದರ ವೈಶಿಷ್ಟಗಳ ಅಧ್ಯಯನ ನಡೆಯುತ್ತಿದೆ. ಭವಿಷ್ಯದಲ್ಲಿ ಕೊರೋನಾ ವೈರಸ್ ನ್ನು ಕೊಲ್ಲುವ ಔಷಧಿಯನ್ನು ಆದಷ್ಟು ಬೇಗ ಕಂಡುಹಿಡಿಯಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳೋಣ.

4 comments: